
ಮಧ್ಯರಾತ್ರಿಗಳಲಿ
ಬದುಕು ಹೆಣೆಯುತ್ತಿರುವ ಹುಳುವೇ
ಹೇಗಿದ್ದೀ....ಅಲ್ಲಿ?
ಈ ರಾತ್ರಿಯಲಿ, ರಾತ್ರಿಗಳಲಿ
ನೀನು ಕೂಡಿಸಿ.... ಜೋಡಿಸಿ
ಹೊಲಿಯುತ್ತಿರುವ ಗೂಡಾದರೂ ಯಾರಿಗೆ?
ನನ್ನ ನಿತ್ಯ ನಿದ್ದೆಗಳಲಿ
ನಿನ್ನ ಮಾತುಗಳು?
ನನ್ನ ಸರಿರಾತ್ರಿಯ ಸ್ವಪ್ನಗಳಲಿ
ನಿ ಕೀಲಿಮಣೆ ಒತ್ತುವ ಶಬ್ಧಗಳು..!
ನಾನು ಹಗಲು... ನೀನು ರಾತ್ರಿ
ವ್ಯತ್ಯಾಸ ಇಷ್ಟಾಯಿತೇ?!
ಪಿಶಾಚಿ ಮೌನದ ರಸ್ತೆಯಲಿ ಗುಟುಕು ಟೀ..
ಇರುಳ ಪಾಳಿಯ ಗೂ...ಗಾನ
ಸಾಗರದಾಚೆಯ ಸಂಬಂದ,
ನೀನೊಬ್ಬ ಬಾಕಿ ವಸೂಲಿಯ ದಫೇದಾರ.
ನಿನ್ನ ಛೇಂಬೆರಿನ ಕೈಯಳತೆಯಲ್ಲಿ
ಸಿಕ್ಕಂತಿರುವ ಚಂದಮಾಮನನ್ನು
ನಾನು ಕನಸಿನಲ್ಲಿ ಹಿಡಿದು
ಎದೆಯೊಳಗೆ ಮುಚ್ಚಿಟ್ಟುಕೊಂಡಿದ್ದೇನೆ,
ಬಾ ತೆರೆದು ತೆಗೆದು ಕೊಳ್ಳುವಿಯಂತೆ..
ವಾಪಸು!!
*** BPO ಒಂದರಲ್ಲಿ ದುಡಿಯುತ್ತಿರುವ ಗೆಳೆಯ ಅವಿರತನಿಗೆ ನವೆಂಬರ್ ೨೬,೨೦೦೮ ರ ರಾತ್ರಿ ೧೨.೦೦ ರಲ್ಲಿಕಳುಹಿಸಿದ ಮೊಬೈಲ್ ನ ಮೆಸೇಜ್ .
ಅವಿರತನಿಂದ ಉತ್ತರ
ಪ್ರತ್ಯುತ್ತರಅಳಿಸುದಿನಪನ ಸಖ ಕನಸುಗಾರನೇ
ದಿನಪವೇ ದಿನವೆಂಬ ಕಾಲವಲ್ಲವಿಂದು
ಚಂದ್ರಮ ಕೇವಲ ಕಾವ್ಯವಲ್ಲವಿಂದು
ಇಂದು ಮುಖಿ ಚಂದ್ರಳಾದೊಡೆ
ಚಂದ್ರ ಸಖ ನಾನಲ್ಲವೇ ಸುಖಿ?
ರಾತ್ರಿ ಗುಂ-ಗಾನದ ಗಮ್ಮತ್ತು ನಿನಗೇನು ಗೊತ್ತು
ಅದು ಗೋಜುಗಲಾಟೆಗಳಿಲ್ಲದ ಗುಂಗಿನ ಗೊತ್ತು
ದಿನದಿ ದುಡಿವ ದಿನಪರೆಲ್ಲ ನಿದ್ರಿಸಿರಲು ನಾನು
ಸಪ್ತಸಾಗರ ದಾಟಿ ಬರುವ ಮನುಜ ನಾನು
ಆನು ತಾನುಗಳ ನಡುವೆ ಇರ್ಪ ನೀನು
ಇನ್ನೂ ನನ್ನ ನೋಡಿ ನಗುವೆಯೇನು...?